ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ವಾರ ನಡೆದಿರುವ ಬಾಬಾ
ಸಾಹೇಬ್ ಬಿ.ಅರ್.ಅಂಬೇಡ್ಕರ್ ನಾಮಫಲಕಕ್ಕೆ ಸಗಣಿ ಬಳಿದು ಅವಮಾನ
ಎಸಗಿರುವ ಘಟನೆ ಜಿಲ್ಲೆಯಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿತ್ತು.
ಆದರೆ ಚಾಮರಾಜನಗರ ಜಿಲ್ಲಾ ಪೋಲೀಸ್ ಸಮಯಪ್ರಜ್ಞೆಯಿಂದ ಮತ್ತು ತೆಗೆದು
ಕೊಂಡ ನಿರ್ಣಯದಿಂದ ಮುಂದೆ ನಡೆಯಬಹುದಾಗಿದ್ದ ಅನಾಹುತಗಳನ್ನು
ತಪ್ಪಿಸಿದಂತಾಗಿದೆ. ಈ ಕಾರಣಕ್ಕೆ ಜಿಲ್ಲೆಯ ಜನರು ಚಾಮರಾಜನಗರ ಜಿಲ್ಲಾ
ಪೋಲೀಸರನ್ನು ಹೃತ್ಪೂರ್ವಕವಾಗಿ ಅಭಿನಂದಿಸಬೇಕಿದೆ.
ಮೊದಲಿಗೆ ಚಾಮರಾಜನಗರ ತಾಲೂಕಿನ ಮಸಣಾಪುರದಲ್ಲಿ ಅಂಬೇಡ್ಕರ್
ನಾಮಫಲಕಕ್ಕೆ ಓರ್ವ ಕಿಡಿಗೇಡಿ ಸಗಣಿ ಬಳಿದು ಅವಮಾನ ಮಾಡಿದ್ದ. ನಂತರ
ಗ್ರಾಮದ ಜನರಿಗೆ ನೇರವಾಗಿ ಸಿಕ್ಕಿಬಿದ್ದಿದ್ದ. ಉದ್ರಿಕ್ತ ಗ್ರಾಮಸ್ಥರು ಆತನಿಗೆ ಹಿಗ್ಗಾಮುಗ್ಗಥಳಿಸಿ ಕಂಬಕ್ಕೆ ಕಟ್ಟಿಹಾಕಿ ಚಪ್ಪಲಿಹಾರ ಹಾಕಿದ್ದರು. ನಂತರ ಸಮಯಪ್ರಜ್ಞೆ ಮೆರೆದ ಪೋಲೀಸರು ಗ್ರಾಮಸ್ಥರ ಕೈಯಿಂದ ಆತನನ್ನು ಬಿಡಿಸಿಕೊಂಡು ಆಸ್ಪತ್ರೆಗೆ
ದಾಖಲಿಸಿದರು.
ಈ ಘಟನೆ ನಂತರ ಶಾಸಕ ಎ.ಆರ್.ಕೃಷ್ಣಮೂರ್ತಿ ಸೇರಿದಂತೆ ಆನೇಕ ರಾಜಕೀಯಮುಖಂಡರು ಗ್ರಾಮಕ್ಕೆ ತೆರಳಿ ಪರಿಸ್ಥಿತಿ ಅವಲೋಕನ ಮಾಡಿ ಗ್ರಾಮಸ್ಥರಿಗೆ ಶಾಂತಿಕಾಪಾಡುವಂತೆ ಮನವಿ ಮಾಡಿದ್ದರು. ಆದರೆ ನಂತರ ದಿನಗಳಲ್ಲಿ ಎರಡು
ಕೋಮುಗಳ ಮುಖಂಡರು ಪ್ರತಿಭಟನೆಗೆ ಕರೆ ನೀಡಿದ್ದರು. ಕಾನೂನು ಸುವ್ಯವಸ್ಥೆ
ಹದಗೆಡಬಹುದು ಎಂಬ ನಿಖರ ಮಾಹಿತಿ ತಿಳಿದ ಜಿಲ್ಲಾ ಎಸ್ಪಿ ಮುತ್ತುರಾಜ್ ಅವರು
ಎರಡೂ ಕೋಮುಗಳಿಗೆ ಪ್ರತಿಭಟನೆಗೆ ಅವಕಾಶ ನಿರಾಕರಿಸಿದರು.
ಈ ಘಟನೆ ಮಾಸುವ ಮುನ್ನವೇ ಪಕ್ಕದ ಹೊಂಗನೂರು ಗ್ರಾಮದಲ್ಲಿ ಸಹ
ಅಂಬೇಡ್ಕರ್ ನಾಮಫಲಕಕ್ಕೆ ಸಗಣಿ ಬಳಿದು ಅವಮಾನ ಮಾಡಲಾಗಿದೆ. ಆದರೆ
ಆರೋಪಿ ಇನ್ನೂ ಸಹ ಪತ್ತೆಯಾಗಿಲ್ಲ. ಪೋಲೀಸರು ತನಿಖೆ ಹಾದಿಯನ್ನು
ತೀರ್ವಗೊಳಿಸಿದ್ದಾರೆ.
ಸಚಿವ ಆಕಾಂಕ್ಷಿಗಳಿಗೆ ನಿರಾಸೆ- ಚಾಮರಾಜನಗರ ಜಿಲ್ಲೆಯಲ್ಲಿ ಜರುಗಿದ ಅಂಬೇಡ್ಕರ್
ನಾಮಫಲಕ ಅವಮಾನ ಪ್ರಕರಣ ಜಿಲ್ಲೆಯ ಶಾಸಕರುಗಳಾದ ಪುಟ್ಟರಂಗಶೆಟ್ಟಿ ಮತ್ತು
ಎ.ಆರ್.ಕೃಷ್ಣಮೂರ್ತಿ ಪಾಲಿಗೆ ಸ್ವಲ್ಪ ಹಿನ್ನಡೆಯಾಗಿದೆ ಎಂಬ ರಾಜಕೀಯ ವಿಶ್ಲೇಷಣೆ
ಕೇಳಿಬರುತ್ತಿದೆ. ಈ ಇಬ್ಬರೂ ನಾಯಕರು ನೂತನ ಸರ್ಕಾರದಲ್ಲಿ ಸಚಿವ ಸ್ಥಾನದ
ಆಕಾಂಕ್ಷಿಗಳಾಗಿದ್ದರು. ಇಬ್ಬರೂ ಕಾಂಗ್ರೇಸ್ ಹೈಕಮಾಡ್ ನಲ್ಲಿ ಬಾರೀ ಲಾಭಿ
ನಡೆಸುತ್ತಿದ್ದಾರೆ
ಆದರೆ ಜಿಲ್ಲೆಯಲ್ಲಿ ನಡೆದ ಈ ಘಟನೆ ಸದ್ಯದ ಮಟ್ಟಿಗೆ ಇಬ್ಬರೂ ಸಚಿವ ಸ್ಥಾನದ
ಆಕಾಂಕ್ಷಿಗಳಿಗೆ ನಿರಾಸೆ ತಂದೊಡ್ಡಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ
ಇಬ್ಬರಲ್ಲಿ ಈ ಪರಿಸ್ಥಿತಿಯಲ್ಲಿ ಯಾರಿಗೇ ಸಚಿವ ಸ್ಥಾನ ನೀಡಿದರೂ ಮತ್ತೊಂದು
ಕೋಮು ಪಕ್ಷದ ವಿರುದ್ದ ತಿರುಗಿ ಬೀಳಬಹುದು ಎಂಬ ಲೆಕ್ಕಾಚಾರ ಕಾಂಗ್ರೇಸ್
ಪಕ್ಷದ್ದಾಗಿದೆ ಎನ್ನಲಾಗಿದೆ. ಆದ ಕಾರಣ ಜಿಲ್ಲೆಗೆ ಸಚಿವ ಸ್ಥಾನ ನೀಡುವ
ವಿಷಯದಲ್ಲಿ ಕಾಂಗ್ರೇಸ್ ಹೈಕಮಾಂಡ್ ಎಚ್ಚರಿಕೆ ಹೆಜ್ಜೆ ಇಡಬಹುದು ಎಂದು
ಹೇಳಲಾಗುತ್ತಿದೆ.
ವರದಿ- ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.