
ಪ್ರವಾಸಾತಿರೇಕ (ಓವರ್ ಟೂರಿಸಂ)
ಪ್ರವಾಸ ಬೇಕಾ? ಹೌದು ಬೇಕೇ ಬೇಕು. ‘ಕೋಶ ಓದಿ ನೋಡು, ದೇಶ ಸುತ್ತಿ ನೋಡು’ ಅಂತ ಅಷ್ಟಿಲ್ಲದೇ ಹೇಳ್ತಾರಾ? ನಮ್ಮ ದೇಶವನ್ನು ಮೊದಲು ಸುತ್ತಿನೋಡಬೇಕು ನಂತರ ಇತರ ದೇಶಗಳನ್ನು ಸಾಧ್ಯವಾದರೆ ಸುತ್ತಿಬಿಡಬೇಕು. ಆದರೆ.. ಆದರೆ…
ಸನ್ಯಾಸಿಗಳು ಎಷ್ಟಾದರೂ ಸುತ್ತಿಕೊಳ್ಳಲಿ, ಸಂಸಾರಿಗಳಿಗೆ ಕುಟುಂಬದ ಕಡೆಗೂ ತುಸು ಗಮನವಿರಲಿ.
ಕೆಲವು ಜನರು ಊಟಕ್ಕೆ ಉಪ್ಪಿನಕಾಯಿ ತಿನ್ರಪ್ಪ ಎಂದರೆ, ಉಪ್ಪಿನಕಾಯಿಯನ್ನೇ ಊಟದ ರೀತಿ ತಿಂತಾರೆ.
ಪ್ರವಾಸ ಜೀವನದ ಒಂದು ಭಾಗವಾಗಬೇಕೇ ಹೊರತು, ಜೀವನ ಪ್ರವಾಸದ ಒಂದು ಭಾಗವಾಗಬಾರದು.
ಕೆಲವರಿಗೆ ಅದೇನೋ ಹುಚ್ಚಪ್ಪ ಒಂದು ಬ್ಯಾಗು ನೇತುಹಾಕಿಕೊಂಡು ಹೊರಟುಬಿಡ್ತಾರೆ. ಮನೆ ಇಲ್ಲ ಮಠ ಇಲ್ಲ ಮನೆಯವರ ಯೋಚನೆ ಮೊದಲೇ ಇಲ್ಲ. ಹೊರಗಿನ ಪ್ರಪಂಚ ತಿಳಿಯುವ ಆಸಕ್ತಿ ಅಥವಾ ಒಳಗಿನ ಅಸಮಾಧಾನ ಮರೆಯುವ ಆತುರ ಎರಡೂ ಕಾರಣಗಳಿಂದಲೂ ಮನ ಪ್ರವಾಸದ ಕಡೆ ಎಳೆಯಬಹುದು. ಹೌದು ದೇಹ ಎಲ್ಲಿಗೆ ಬೇಕಾದರೂ ಹೋಗಬಹುದು ರೀ, ಆದರೆ ಮನಸ್ಸು ಕ್ಷಣ ಮಾತ್ರಕ್ಕಾದರೂ ನಮ್ಮವರ, ನಮ್ಮೂರ ಸುತ್ತಿಬರುವುದಾ ಮರೆಯುವುದೇ? ಕೊನೆಗೆ ಸೇರುವ, ಇರುವ, ಇರಬೇಕಾದ ಜಾಗ ಕೂಡ ಅದೇ ಅಲ್ಲವೇ? ಹಾಗಾಗಿ ಪ್ರಯಾಸದ ಪ್ರವಾಸ ಬೇಡ, ಪ್ರಶಂಸೆಯ ಹಿತಕರ ಪ್ರವಾಸವಿರಲಿ.
ಮತ್ಯಾರೋ ಹೋಗುತ್ತಾರೆಂದೋ, ಯಾರ ಮುಂದೆಯೋ ಕೊಚ್ಚಿಕೊಳ್ಳಬೇಕೆಂದೋ ಪ್ರವಾಸ ಹೋಗುವುದರ ಬದಲಿಗೆ, ನಮ್ಮಿಚ್ಚಗೆ – ನಮ್ಮ ವೆಚ್ಚಕ್ಕೆ ಸರಿ ಹೊಂದುವ, ಪ್ರವಾಸ ನಮ್ಮದಾಗಿರಲಿ. ಮೊದಲಿಗೆ ನಮ್ಮ, ನಮ್ಮ ಸುತ್ತ -ಮುತ್ತಲ ಪ್ರದೇಶಗಳ ಬಗ್ಗೆ ತಿಳಿದುಕೊಂಡು, ನಂತರ ಇತರೆ ಪ್ರದೇಶಗಳ ಬಗ್ಗೆ ತಿಳಿಯಲು ಪ್ರಯತ್ನಿಸೋಣ. ಆಹ್ಲಾದಕರ ಪ್ರವಾಸ ಪ್ರಸನ್ನತೆಯನ್ನು ತರಲಿ ದೇಹಕ್ಕೂ ಮನಸ್ಸಿಗು.
✍🏻 ರಶ್ಮಿ ಕೆ. ವಿಶ್ವನಾಥ್
ಮೈಸೂರು