

ಕೊಳ್ಳೇಗಾಲ : ಕೊಳ್ಳೇಗಾಲ ಪಟ್ಟಣದ ಭೀಮನಗರ ದೊಡ್ಡ ಯಜಮಾನ ಹಾಗೂ ಪತ್ರಕರ್ತ ಚಿಕ್ಕ ಮಾಳಿಗೆ ಮೇಲೆ ಪಾನಮತ್ತ ಯುವಕನೋರ್ವ ಹಲ್ಲೆ ನಡೆಸಿದ ಪರಿಣಾಮ ಗಾಯಾಳು ಪತ್ರಕರ್ತ ಚಿಕ್ಕಮಾಳಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಶುಕ್ರವಾರ ರಾತ್ರಿ ಚಿಕ್ಕಮಾಳಿಗೆ ತಮ್ಮ ಪತ್ನಿ ಜೊತೆಗೆ ಹೊಟೆಲ್ ವೊಂದರಲ್ಲಿ ತಿಂಡಿ ತಿನ್ನಲು ಹೋಗಿದ್ದರು. ಈ ವೇಳೆ ಅಲ್ಲೇ ಇದ್ದ ಪಾಳ್ಯ ಗ್ರಾಮದ ರವಿನಾಯ್ಕ ಎಂಬಾತ ಪಾನಮತ್ತನಾಗಿ ನಾನು ಭೀಮನಗರದವನು ಎಂದು ಹೇಳಿ ಹೋಟೆಲ್ ಮಾಲೀಕರ ಜೊತೆಗೆ ವಾಗ್ವಾದಕ್ಕಿಳಿದಿದ್ದ.
ಇದನ್ನು ಗಮನಿಸಿದ ಭೀಮನಗರ ದೊಡ್ಡ ಯಜಮಾನ ಚಿಕ್ಕಮಾಳಿಗೆ ಅವರು, ನಮ್ಮ ಬೀದಿ ಹೆಸರು ಏಕೆ ಹೇಳುತ್ತೀಯ ಎಂದು ಪ್ರಶ್ನಿಸಿದ್ದಾರೆ.
ಇದರಿಂದ ಕುಪಿತನಾದ ಪಾನಮತ್ತ ಯುವಕ ಚಿಕ್ಕಮಾಳಿಗೆ ಅವರ ಕೈಯನ್ನು ಬಲವಾಗಿ ತಿರುವಿ ಕೆಳಕ್ಕೆ ಕೆಡವಿದ್ದಾನೆ. ಈ ಘಟನೆಯಲ್ಲಿ ಚಿಕ್ಕಮಾಳಿಗೆ ಅವರ ಕೈ ಮೂಳೆ ಮುರಿದಿದೆ. ತುಂಬಾ ನೋವಿನಿಂದ ಬಳಲಿದ ಅವರು, ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ನಂತರ ಕಾಮಗೆರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಪಡೆದರು.
ಜಿಲ್ಲಾಧ್ಯಕ್ಷ ದೇವರಾಜು ಕಪ್ಪಸೋಗೆ ಭೇಟಿ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪತ್ರಕರ್ತ ಚಿಕ್ಕಮಾಳಿಗೆ ಆರೋಗ್ಯ ವಿಚಾರಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರು, ಹನೂರು ತಾಲ್ಲೂಕು ಪತ್ರಕರ್ತರ ಸಂಘದ ಗೌರವಾಧ್ಯಕ್ಷ ದೇವರಾಜನಾಯ್ಡು, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ಡಿ.ಸಿದ್ದರಾಜು ಮತ್ತಿತರರು ಇದ್ದರು.
ದೊಡ್ಡ ಯಜಮಾನರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ದೊಡ್ಡತನ ಮೆರೆದ ಮಾಜಿ ಸಚಿವ ಎನ್.ಮಹೇಶ್ :
ಭೀಮನಗರದ ದೊಡ್ಡ ಯಜಮಾನರು ಆಗಿರುವ ಪತ್ರಕರ್ತ ಚಿಕ್ಕಮಾಳಿಗೆ ಅವರನ್ನು ಮಾಜಿ ಸಚಿವ ಎನ್.ಮಹೇಶ್ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿ ದೊಡ್ಡತನ ಮೆರೆದಿದ್ದಾರೆ.
ಮಾಜಿ ಸಚಿವ ಎನ್.ಮಹೇಶ್ ಅವರು ಕಳೆದ ಲೋಕಸಭಾ ಚುನಾವಣಾ ವೇಳೆ ಕೊಳ್ಳೇಗಾಲ ಪಟ್ಟಣದ ಭೀಮನಗರ ಜನರ ಮೇಲೆ ಅನಪೇಕ್ಷಿತ ಪದ ಬಳಸಿ ಮಾತನಾಡಿದ್ದರು. ಇದು ಭೀಮನಗರ ನಿವಾಸಿಗಳು ಮತ್ತು ಯಜಮಾನರನ್ನು ಕೆರಳಿಸಿತ್ತು.
ಆಗಲೂ ಸಹ ಚಿಕ್ಕಮಾಳಿಗೆ ಅವರೇ ದೊಡ್ಡ ಯಜಮಾನರಾಗಿದ್ದರು, ಭೀಮನಗರ ಜನರ ಕ್ಷಮೆ ಕೇಳುವವರೆಗೆ ಮಾಜಿ ಸಚಿವ ಎನ್.ಮಹೇಶ್ ಅವರನ್ನು ಭೀಮನಗರ ಬಡಾವಣೆಗೆ ಯಾವುದೇ ಕಾರ್ಯಕ್ರಮಕ್ಕೂ ಆಹ್ವಾನಿಸ ಬಾರದೆಂದು ನಿರ್ದಾರ ಮಾಡಲಾಗಿತ್ತು, ಇದೇ ಕಾರಣಕ್ಕೆ ಭೀಮನಗರ ವತಿಯಿಂದ ಆಯೋಜಿಸಲಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮಕ್ಕೂ ಆಹ್ವಾನ ನೀಡಿರಲಿಲ್ಲ.
ಈ ಘಟನೆಗಳಿಂದ ಸ್ವತಃ ಮಾಜಿ ಸಚಿವ ಎನ್.ಮಹೇಶ್ ಅವರು ನೊಂದಿದ್ದರು, ಆದರೂ ಸಹ ಭೀಮನಗರ ದೊಡ್ಡ ಯಜಮಾನರು ಆದ ಚಿಕ್ಕಮಾಳಿಗೆ ಅವರು, ಪಾನಮತ್ತ ಯುವಕನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿದು ಭೇಟಿಯಾಗಿ ಆರೋಗ್ಯ ವಿಚಾರಿಸಿ ದೈರ್ಯ ತುಂಬಿದ್ದಾರೆ.
ಈ ಮೂಲಕ ಮಾಜಿ ಸಚಿವ ಎನ್.ಮಹೇಶ್ ಅವರು ತಮ್ಮ ದೊಡ್ಡತನ ಮೆರೆದಿದ್ದಾರೆ ಎಂದೇ ಹೇಳಲಾಗುತ್ತಿದೆ.
ವರದಿ : ನಿಂಪು ರಾಜೇಶ್