*ಬಂಡಳ್ಳಿಯ ವಿವಿಧ ವಾರ್ಡ್ಗಳಲ್ಲಿ ಕತ್ತಲ ಸಾಮ್ರಾಜ್ಯ: ಮೂರು ತಿಂಗಳಿಂದ ಕೆಟ್ಟು ನಿಂತ ಕಸದ ವಾಹನ, ಪಿಡಿಒ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ*
ಹನೂರು:ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಪಂಚಾಯತಿ ಆಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಗ್ರಾಮ ಪಂಚಾಯತಿಯಲ್ಲಿ ಜನಪ್ರತಿನಿಧಿಗಳ ಅವಧಿ ಮುಗಿದಿದ್ದು, ಆಡಳಿತಾಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ನೇತೃತ್ವದಲ್ಲೇ ಪಂಚಾಯತಿಯ ಸಂಪೂರ್ಣ ಆಡಳಿತ ನಡೆಯುತ್ತಿದೆ. ಆದರೆ, ಅಧಿಕಾರಿಗಳು ಗ್ರಾಮದ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗ್ರಾಮದ ಪ್ರಮುಖ ರಸ್ತೆಗಳು ಸೇರಿದಂತೆ ಬಹುತೇಕ ವಾರ್ಡ್ಗಳಲ್ಲಿ ಬೀದಿ ದೀಪಗಳು ಕೆಟ್ಟುಹೋಗಿದ್ದು, ರಾತ್ರಿಯಾಗುತ್ತಿದ್ದಂತೆ ಇಡೀ ಊರೇ ಕಗ್ಗತ್ತಲಲ್ಲಿ ಮುಳುಗುತ್ತಿದೆ. ಕಂಬಗಳಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು ದುರಸ್ತಿ ಕಾಣದೆ ತಿಂಗಳುಗಳೇ ಉರುಳಿವೆ. ಇದರಿಂದಾಗಿ ರಾತ್ರಿ ವೇಳೆ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಓಡಾಡಲು ಹರಸಾಹಸ ಪಡುವಂತಾಗಿದೆ. ಕತ್ತಲೆಯಲ್ಲಿ ವಿಷಜಂತುಗಳ ಭಯದ ನಡುವೆಯೇ ನಾಗರಿಕರು ಸಂಚರಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಮೂರು ತಿಂಗಳಿಂದ ಕೆಟ್ಟು ನಿಂತ ಕಸದ ವಾಹನ:
ಇನ್ನೊಂದೆಡೆ, ಗ್ರಾಮದ ಸ್ವಚ್ಛತೆ ಕಾಪಾಡಲು ನೀಡಲಾಗಿದ್ದ ಕಸ ವಿಲೇವಾರಿ ವಾಹನವು ಕಳೆದ ಸುಮಾರು ಮೂರು ತಿಂಗಳಿಂದ ದುರಸ್ತಿಗೆ ಬಾರದೆ ಪಂಚಾಯತಿ ಕಚೇರಿಯ ಮುಂಭಾಗದಲ್ಲೇ ಧೂಳು ಹಿಡಿದು ನಿಂತಿದೆ. ಗ್ರಾಮದ ವಾರ್ಡ್ಗಳಿಗೆ ವಾಹನ ಬಾರದೆ ತಿಂಗಳುಗಳೇ ಕಳೆದಿದ್ದರೂ ಪಿಡಿಒ ಹಾಗೂ ಪಂಚಾಯತಿ ಸಿಬ್ಬಂದಿ ಅದನ್ನು ದುರಸ್ತಿ ಮಾಡಿಸುವ ಯಾವುದೇ ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ವಾರ್ಡ್ಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸಂಗ್ರಹವಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ಗ್ರಾಮದ ಎಲ್ಲಾ ವಾರ್ಡ್ಗಳ ಬೀದಿ ದೀಪಗಳನ್ನು ತಕ್ಷಣವೇ ದುರಸ್ತಿಗೊಳಿಸಿ, ಮೂರು ತಿಂಗಳಿಂದ ಕೆಟ್ಟು ನಿಂತಿರುವ ಕಸ ವಿಲೇವಾರಿ ವಾಹನವನ್ನು ಸರಿಪಡಿಸಿ ಎಂದಿನಂತೆ ಕಸ ಸಂಗ್ರಹಣೆ ಆರಂಭಿಸಬೇಕು. ಇಲ್ಲವಾದಲ್ಲಿ ಪಂಚಾಯತಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಉನ್ನತ ಅಧಿಕಾರಿಗಳಾದರೂ ತಕ್ಷಣವೇ ಮಧ್ಯಪ್ರವೇಶಿಸಿ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.
ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.