
ಬಾಲ್ಯದ ಆಟ…… ಆ ಹುಡುಗಾಟ
ನನ್ನ ಬಾಲ್ಯದ ನೆನಪುಗಳು ಲೆಕ್ಕವಿಲ್ಲದಷ್ಟು. ಆದರೆ ಈಗಿನ ಮಕ್ಕಳಿಗೆ ಆ ಪುಣ್ಯವಿಲ್ಲ ಎನ್ನಬಹುದು. ಅದಕ್ಕೆ ಕಾರಣ ಪೋಷಕರೂ ಸಹ ಇರಬಹುದು ಜೊತೆಗೆ ವಾತಾವರಣ ಕೂಡ.
ಆ ವಿಷಯ ಅಷ್ಟು ಸಾಕು. ಬನ್ನಿ ಬಾಲ್ಯಕ್ಕೆ ಹೋಗೋಣ ….
😇ಅಡ್ಡ.. ಗುಡ್ಡ… ಮೀಸೆ… ಒಮ್ಮೆ ಗೋಲಿ ಆಟ ಆಡುತ್ತಾ ಇದ್ದೆ. ನನ್ನ ಜೂನಿಯರ್ ಹಂಸಾಳ ಅಣ್ಣ ನೋಡಿದ “ಓಯ್ ಓದಿಕೊಳ್ಳೋದು ಬಿಟ್ಟು ಗಂಡುಮಕ್ಕಳ ತರ ಆಟ ಆಡ್ತಾ ಇದ್ದೀಯ? ಹೋಗು ಮನೆಗೆ” ಗದರಿದ. ಮುಖ ಮುದರಿಕೊಂಡು ಮನೆಗೆ ಹೋದೆ😏.
🙎♀️10ನೇ ತರಗತಿ, ಸೋಷಿಯಲ್ ಟೀಚರ್ ಬಂದು ಸೈನ್ ಮಾಡಲು ಎಲ್ಲರೂ ನೋಟ್ಸ್ ತರುವಂತೆ ಹೇಳಿದರು. ನನ್ನದು ಕರೆಕ್ಷನ್ ಮಾಡಿಸಿಕೊಂಡುಬರಲು ಹೇಳಿ ಫ್ರೆಂಡ್ ಮಂಕು ಅಲ್ಲಲ್ಲ ಪಿಂಕು ಹತ್ತಿರವೇ ಕೊಟ್ಟೆ. ಅಷ್ಟು ವಿದ್ಯಾರ್ಥಿಗಳ ಮಧ್ಯೆಯೂ ಅವಳು ಎರಡು ನೋಟ್ಸ್ ಕೊಟ್ಟದ್ದು ಅದ್ಹೇಗೋ ಕುಮಾರ್ ಸರ್ ಗೆ ತಿಳಿದುಹೋಯಿತು. “ಯಾರದ್ದು ಇನ್ನೊಂದು?” ಕೇಳಿದರು. ಪಿಂಕು ಮೆಲ್ಲಗೆ ಹೇಳಿದಳು “ರಶ್ಮಿದು ಸಾರ್” ನೆನ್ನೆತಾನೇ ಹೊಗಳಿದ್ದ ಸರ್. ಕೋಪಗೊಂಡು “ಎಲ್ಲಿ ರಶ್ಮಿ ಕೈ ನೀಡು” ಎಂದವರೇ ಕಡ್ಡಿ ಎತ್ತಿದರು. ಅಷ್ಟರಲ್ಲಿ ನಾ ತಲೆ ಸುತ್ತಿ ಬಿದ್ದುಬಿಟ್ಟೆ. ಎಲ್ಲರೂ ಎತ್ತಿಕೂರಿಸಿ ಉಪಚರಿಸಿದರು. ಕುಮಾರ್ ಸರ್ ನೊಂದು ನುಡಿದರು “ನಿನಗೆ ಹುಷಾರಿಲ್ಲ ಎಂದು ಹೇಳಬೇಕಲ್ಲವೇನಮ್ಮ?” Actually ನನಗೆ ಯಾವ ದೊಡ್ಡರೋಗವೂ ಇರಲಿಲ್ಲ ಚೆನ್ನಾಗಿಯೇ ಇದ್ದೆ. ಭಯ ಅಂತು ಮೊದಲೇ ಇರಲಿಲ್ಲ. ಅದೇನಾಯಿತೋ ಒಟ್ಟಿನಲ್ಲಿ ಅವರೆಲ್ಲರೂ ನನಗೆ ಚೆನ್ನಾಗಿ ತಿನ್ನಿಸಿದರು ನಾನೂ ಸಹ ಸಪ್ಪೆಮೋರೆ ಮಾಡಿಕೊಂಡು ಕೊಟ್ಟಿದ್ದೆಲ್ಲಾ ಚೆನ್ನಾಗೇ ತಿಂದೆ ಸಿಕ್ಕಿದ ಚಾನ್ಸ್ ಬಿಡೋದು ಎಲ್ಲಾದ್ರೂ ಉಂಟಾ…🥳
🐥ಅಪ್ಪ ಡ್ಯೂಟಿಯ ಮೇಲೆ ಬೇರೆ ಊರಿನಲ್ಲಿದ್ದರು. ಅಮ್ಮ ಅಜ್ಜಿಯ ಊರಿನಿಂದ ರಾತ್ರಿ ಆದರೂ ಬರಲೇ ಇಲ್ಲ. ʼಏನು ಮಾಡುವುದು ಅಷ್ಟು ದೊಡ್ಡ ಮನೆ ಒಬ್ಬಳೇ ಹೇಗೆ ಮಲಗಲಿ?ʼಸರಿ ತಲೆ ಓಡಿಸಿ ದೊಡ್ಡಪ್ಪನ ಮನೆಗೆ ಹೋಗಿ, ನನ್ನದೇ ವಯಸ್ಸಿನ ದೊಡ್ಡಪ್ಪನ ಮಗಳು ನಯನಳನ್ನು ಮನೆಗೆ ಬರುವಂತೆ ಕೇಳಿಕೊಂಡೆ, ಅವಳೂ ಸಹ ಒಪ್ಪಿ ಬಂದಳು. ಸರಿ ಇಷ್ಟು ಬೇಗ ಮಲಗುವುದು ಬೋರು ಆಟ ಆಡೋಣವೆಂದು ಅವಳನ್ನು ಕರೆದುಕೊಂಡು ಕಟ್ಟೆಮಣೆ ಬರೆದು ಕೂತೆ. ಸುಮ್ಮನೆ ಆಡಿದರೆ ಮಜಾ ಇರೋಲ್ಲ, ಕಟ್ಟಿ ಆಡೋಣವೆಂದರೆ ದುಡ್ಡು, ಪಿನ್ನು ಏನೂ ಇಲ್ಲ. “ಕೈಕಾಯಿಸುವ ಆಟ ಆಡೋಣವೇ?” ಅವಳನ್ನು ಕೇಳಿದೆ. ಅವಳೂ “ಹೂo” ಎಂದಳು. ಮೊದಲ ಆಟ ಗೆದ್ದಾಗ ಸುಮ್ಮನಾಗಿಬಿಟ್ಟೆ, ಎರಡನೇ ಆಟ ಗೆದ್ದಾಗ “ಕೈ ಕಾಯಿಸು” ಎಂದು ಹೇಳಿ, ಮೆಲ್ಲಗೆ ಹೊಡೆದೆ.
3ನೇ ಬಾರಿಯೂ ನಾನೆ ಗೆದ್ದುದ್ದರಿಂದ, “ನಯನ, ಸುಮ್ಮನೆ ಆಡಿದರೆ ಮಜಾ ಬರೋಲ್ಲ ನೀ ಜೋಪಾನವಾಗಿ ಕೈ ಕಾಯಿಸಿ ತಪ್ಪಿಸಿಕೋ ನಾ ನಿಜವಾಗಿಯೂ ಹೊಡೆಯುತ್ತೇನೆ” ಎಂದೆ. ಆ ಗೂಬೆ “ಹೂಂ ಸರಿ” ಎಂದವಳೇ, ಹುಷಾರಾಗಿ ತಪ್ಪಿಸಿಕೊಳ್ಳದೆ ಕೈ ಕೊಟ್ಟಳು, ನಾ ಸರ್ರಿಯಾಗಿ ಕೊಟ್ಟೆ. ಅವಳಿಗೆ ಚುರಿಗುಟ್ಟಿಹೋಯಿತು. ಮುನಿಸಿಕೊಂಡು ಹೊರಟೇಹೋದಳು.ನಾನೊಬ್ಬಳೇ ಇರಲು ಸ್ವಲ್ಪ ಹೊತ್ತು ಭಯ ಆಯಿತು, ನಂತರ ಆ ಭಯಕ್ಕೆ ನಾನೇ ಹೊಂದಿಕೊಂಡು ಮಲಗಿಬಿಟ್ಟೆ🐤
📺ಅವಾಗ ನಮ್ಮ ಮನೆಗಳಲ್ಲಿ TV ಇರಲಿಲ್ಲ. ಗಣೇಶನನ್ನ ಕೂರಿಸಿದಾಗಲೋ, ಇಲ್ಲ ಯಾರೋ ಸತ್ತಾಗ ತಿಥಿlಯಲ್ಲೋ ರಸ್ತೆಯಲ್ಲಿ ಒಂದು ವಿಡಿಯೋ ಇಟ್ಟು ಸಿನಿಮಾ ಹಾಕುತ್ತಿದ್ದರು ರಸ್ತೆಯಲ್ಲಿ ಕೂತು ನೋಡಬೇಕಾಗಿತ್ತು.
ನಾ ಹುಡುಗಿಯಾದ್ದರಿಂದ ಹೋಗಲು ಅಪ್ಪ ಬಿಡುತ್ತಿರಲಿಲ್ಲ. ಅವರು ಮಲಗಿದ ಮೇಲೆ ಹೇಗೋ ತಪ್ಪಿಸಿಕೊಂಡು ಹೋಗುತ್ತಿದ್ದೆ. ಆದರೆ, ಶಾಲೆಯಲ್ಲಿ ಕನ್ನಡ ಟೀಚರ್ ಸಹ ಹೇಳಿಬಿಟ್ಟಿದರು “ನಾಳೆ ಗಣಪತಿ ಹಬ್ಬದಲ್ಲಿ ಹಾಕುವ ವಿಡಿಯೋ ನೋಡ್ಲಿಕ್ಕೆ ಯಾರು ಹೋಗಬಾರದು. ಹೋದರೆ ಗೊತ್ತಲ್ಲಾ?”.
ನನಗೆ ಗೊತ್ತು ಅವರು ಗ್ಯಾರಂಟಿ ಗೂಡಾಚಾರಿ ಕೆಲಸ ಮಾಡಲು ಯಾರನ್ನಾದ್ರೂ ಬಿಟ್ಟಿಯೇ ಇರುತ್ತಾರೆ.ಆ ಗುಡಾಚಾರಿ ಯಾರೆಂದು ಸಹ ನನಗೆ ತಿಳಿದುಹೋಯಿತು. ಕಣ್ಣು ಮಾತ್ರ ಬಿಟ್ಟು ಉಳಿದಿದ್ದಾವುದು ಅವನಿಗೆ ಕಾಣಿಸದಂತೆ ರಗ್ಗು (ಬ್ಲಾಂಕೆಟ್) ಹೊತ್ತಿಕೊಂಡು ಸುಮಾರು ದೂರದಿಂದಲೇ ಸೈನಿಕರು ತಂತಿಬೇಲಿ ಕೆಳಗೆ ತೆವಳುವಂತೆ, ತೆವಳುತ್ತಾ ಹೋಗಿ ಹೆಂಗಸರ ಮಧ್ಯದಲ್ಲಿ ಕೂತು ಧೈರ್ಯವಾಗಿ ಸಿನಿಮಾ ನೋಡಿ ಬಂದೆ. ಆ ಗೂಡಾಚಾರಿ ಹುಡುಗನಿಗೆ ಅದ್ಹೇಗೆ ಗೊತ್ತಾಯಿತೋ? ಹೋಗಿ ಹೇಳಿಬಿಟ್ಟಿದ್ದ. ನಾನು ಕ್ಲಾಸ್ ಟಾಪರ್ ಇದ್ದುದ್ದರಿಂದ ಗೂಸಾ ಏನು ಬೀಳಲಿಲ್ಲ. ಆದರೆ ಸುಪ್ರಭಾತ ಅಂತು ಸಿಕ್ತು🤓. ಆ ಗೂಡಾಚಾರಿ ಗೂಬೆ sslc ಪಾಸೇ ಆಗ್ಲಿಲ್ಲ ಬಿಡಿ.
🌺ಒಂದು ಹಿತ್ತಲಿನಲ್ಲಿ (ಗಿಡ, ಹುಲ್ಲಿನ ಗುಡ್ಡೆ, ತಿಪ್ಪೆ ಇರುವ ಜಾಗ) ರಾಶಿ ರಾಶಿ ಮಲ್ಲಿಗೆ ಹೂ ಬಿಡುತ್ತಿತ್ತು. ಆ ಹಿತ್ತಲಿನ ಓನರ್ ಆಂಟಿ ದಿನಾ ಸಾಯಂಕಾಲ 5 ಗಂಟೆಗೆ ಕಸ (ಹಸುವಿನ ಸಗಣಿ ಇತ್ಯಾದಿ) ಹಾಕಲು ಬರುತ್ತಿದ್ದರಿಂದ, ಒಮ್ಮೆ ನಾನು 3 ಗಂಟೆಗೆ ಹೋಗಿ ಮಲ್ಲಿಗೆ ಮೊಗ್ಗು ಕಿತ್ತು ತಂದುಬಿಡೋಣವೆಂದು ಮಲ್ಲಿಗೆ ಬಳ್ಳಿ ಹಬ್ಬಿದ ಮರಕ್ಕೆ ಹತ್ತಿದ್ದೆ. ಊಟ ತಿಂದದ್ದು ಅರಗಲಿಲ್ಲ ಅನ್ನಿಸುತ್ತೆ ಆ ಆಂಟಿ ಆ ದಿನ 3.15ಗೇ ಬಂದುಬಿಡೋದಾ…ಮರದ ಮೇಲೆ ಹೋದ ಮಾನ ಮಲ್ಲಿಗೆ ಕೊಟ್ರೆ ಬರುತ್ಯೆ? ಮಲ್ಲಿಗೆಯೂ ಇಲ್ಲ ಮರ್ಯಾದೆ ಮೊದಲೇ ಉಳಿಯಲಿಲ್ಲ🥀
😷ಅವಾಗ 9ನೇ ತರಗತಿ ಓದುತ್ತಿದ್ದ ನಾನು – ಶಶಿ ನಡೆದು ಬರುತ್ತಿದ್ದೆವು. ಪ್ರಾರ್ಥನೆ ಶುರುವಾಗಿಯೇಬಿಟ್ಟಿತು. ಓಡಿ ಬಂದು ಲೈನು ಸೇರಿಕೊಳ್ಳದೆ, ‘ಹೇಗಿದ್ರು ಶುರು ಆಯಿತಲ್ಲ ಇನ್ನೇನು ಮಾಡುವುದು’ ಎಂದು ಆರಾಮವಾಗಿ ಹರಟೆ ಹೊಡೆಯುತ್ತಾ ಬಂದೆವು “ಏಯ್ ಬನ್ರೀಲೆ ಇಲ್ಲಿ” ಧಾರವಾಡ ಕಡೆಯ ಹಾಲಪ್ಪ ಸರ್ ಕರೆದು “ಈ ಸ್ಕೂಲಿನ ಸುತ್ತ 3 ಬಾರಿ ಓಡಿ ಬನ್ರೀಲೆ” ಎಂದಾಗಲೇ ಗೊತ್ತಾಗಿದ್ದು ‘ನಾವು ಮಾಡಿದ್ದು ತಪ್ಪು’ಎಂದು🤭 ಅವಮಾನದಿಂದ ಹರಿಯುತ್ತಿರುವ ಕಣ್ಣೀರನ್ನು ಯಾರಿಗೂ ಕಾಣದಂತೆ ಒರೆಸಿಕೊಂಡು ಓದಿದೋ ಎಂದು ನಡೆದುಕೊಂಡು ಬಂದದ್ದಾಯಿತು🤦♂️
🏃7th ಓದುತ್ತಿರುವಾಗ ಇಸ್ಕೂಲಿನಲ್ಲಿ ಕೆಲವು ಆಟದ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಹೈಜಂಪ್ ನಾನೇ ಫಸ್ಟ್. ಪ್ರೈಜ್ ಎಂದು, ಒಂದು ಚಿಕ್ಕ ಲೋಟ ಕೊಟ್ಟರು. ನನ್ನಮ್ಮ ಹೇಳಿದರು “ಅಯ್ಯೋ ಈ ಚೋಟಾ ಲೋಟಕ್ಕೆ ಅಷ್ಟು ಎತ್ತರ ನೆಗೆದ್ಯಾ? ಇನ್ನು ಹೋಗಬೇಡ”. ಅವರಿಗೇನು ಗೊತ್ತು ಆಟದಲ್ಲಿ ಗೆಲ್ಲುವ ಮಜಾ. ಮುಂದಿನ ದಿನ ಮಡಕೆ ಹೊಡೆಯುವ ಆಟ. ವಿದ್ಯಾರ್ಥಿಗಳನ್ನು ನಿಲ್ಲಿಸುತ್ತಿದ್ದ ಜಾಗಕ್ಕೂ ಮಡಕೆ ಇಟ್ಟಿದ್ದ ಜಾಗಕ್ಕು 50 ಮೀಟರ್ ದೂರ ಇರಬಹುದು ಅನ್ಸುತ್ತೆ. ʼಹೇಗೆ ಹೊಡೆಯೋದು?ʼ ಬೇರೆಯವರು ಹೊಡೆಯುವಾಗ ನಾ ಪ್ಲ್ಯಾನ್ ಮಾಡುತ್ತಾ ನಿಂತೆ. ಕೊಕ್ಕೋ ಆಡಲು ಹಾಕಿದ್ದ ಗೆರೆ ಹಾಗೇ ಇತ್ತು. ಅದೇ ಗೆರೆಯನ್ನು ಕಾಲಿನಲ್ಲಿ ಸವೆಸುತ್ತಾ ಹೋದರೆ ಸರಿಯಾಗಿ ಅದು ಹೊಡೆಯಲು ಸಿಗುತ್ತದೆ, ಪ್ಲ್ಯಾನ್ ಪಕ್ಕಾ ಮಾಡಿಕೊಂಡು ನಿಂತೆ.
ನನ್ನ ಕಣ್ಣಿಗೆ ಬಟ್ಟೆ ಕಟ್ಟಿದ ಪ್ರಕಾಶ್ ಸರ್ ಕೇಳಿದರು “ಕಾಣಿಸುತ್ತಿದೆಯೇನೋ?” “ಇಲ್ಲಾ ಸರ್” ಎಂದೆ. 3 ಸುತ್ತು ಸುತ್ತಿಸಿ ಬಿಟ್ಟರು. ನನ್ನ ಯೋಜನೆಯ ಪ್ರಕಾರ ಸವೆದು ಹೋಗಿದ್ದ ಕೊಕ್ಕೋ ಗೆರೆಯನ್ನು ಕಾಲಿನಲ್ಲಿ ಟಚ್ ಮಾಡಿ ಫೀಲ್ ಮಾಡುತ್ತಾ ಹೋದೆ ಗೆರೆ ಕೊನೆಗೊಂಡಾಗ, ನನ್ನ ಕೈಯಲ್ಲಿದ್ದ ಕಡ್ಡಿಯಿಂದ ಎತ್ತಿ ಸರಿಯಾಗಿ ಬಡಿದೆ. ಮಣ್ಣಿನ ಮಡಕೆಯ ಬದಲಿಗೆ ತಾಮ್ರದ ಅಂಡೆ ಇಟ್ಟಿದ್ದರಿಂದ ʼಟಣ್ʼ ಎಂಬ ಶಬ್ದ ಜೋರಾಗಿ ಬಂತು ಹಿಂದಿನಿಂದಲೇ ಚಪ್ಪಾಳೆಗಳ ಶಬ್ದವೂ ಕೇಳಲಾರಂಬಿಸಿತು. ಸರ್ ಓಡಿಬಂದು ಕೇಳಿದರು “ಕಾಣಿಸುತ್ತಾ ಇತ್ತೇನೋ?” ನಾ ಆತ್ಮವಿಶ್ವಾಸದಿಂದಲೇ ಹೇಳಿದೆ “ಇಲ್ಲಾ ಸರ್” ಸೋ ಅಲ್ಲೂ ಫಸ್ಟ್ ಪ್ರೈಜ್🏆🏅
ಹೀಗೆ ನನ್ನನ್ನು ಲೆಕ್ಕವಿಲ್ಲದಷ್ಟು ಸರಣಿ ಸವಿನೆನಪುಗಳ ಸರಮಾಲೆಯ ಒಡತಿಯಾಗಿಸಿದ ನನ್ನ ಬಾಲ್ಯಕ್ಕೊಂದು ಒಲುಮೆಯ ನಮನ.
✍🏻 ರಶ್ಮಿ ಕೆ. ವಿಶ್ವನಾಥ್
ಮೈಸೂರು