

ಕೊಳ್ಳೇಗಾಲ: ಸುಮಾರು ವರ್ಷಗಳಿಂದ ಪಾರಂಪರಿಕವಾಗಿ ಸುತ್ತಳ್ಳಿಗಳ ನೀಲಗಾರರ ಸಮ್ಮುಖದಲ್ಲೇ ನಡೆದುಕೊಂಡು ಬರತ್ತಿರುವ ಘನ ನೀಲಿ ಸಿದ್ದಪ್ಪಾಜಿಯವರ ಶ್ರೀ ಕ್ಷೇತ್ರ ಚಿಕ್ಕಲ್ಲೂರನ್ನು ಪ್ರಾಧಿಕಾರದ ಸುಪರ್ದಿಗೆ ನೀಡುವುದನ್ನು ವಿರೋದಿಸಿ ಚಿಕ್ಕಲ್ಲೂರಲ್ಲಿ ಪ್ರತಿಭಟನೆ ಶಾಂತಿಸಭೆಯನ್ನು ನೆಡೆಸಲಾಯಿತು.
ಮಂಟೇಸ್ವಾಮಿ ಸಿದ್ದಪ್ಪಾಜಿ ಕ್ಷೇತ್ರಗಳು ಹಾಗೂ ನೀಲಗಾರರ ಪರಂಪರೆ ಅಭಿವೃದ್ಧಿಗಾಗಿ ಶ್ರೀ ಮಂಟೇಸ್ವಾಮಿ ಕ್ಷೇತ್ರಗಳ ನೀಲಗಾರ ಅಭಿವೃದ್ಧಿ ಪ್ರಾಧಿಕಾರ ರಚನೆ ಅನುಮೋದನೆಗೆ ಆದೇಶಿಸಿದ ಸುದ್ದಿ ದಿನಪತ್ರಿಕೆಗಳಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ತಾಲೂಕಿನ ಶ್ರೀ ಕ್ಷೇತ್ರ ಚಿಕ್ಕಲೂರು ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರು ಹಾಗೂ ನೀಲಗಾರರು ಶ್ರೀ ಕ್ಷೇತ್ರವನ್ನು ಪ್ರಾಧಿಕಾರದ ಸುಪರ್ದಿಗೆ ವಹಿಸದಂತೆ ಪ್ರತಿಭಟಿಸಿ ಶಾಂತಿ ಸಭೆಯನ್ನು ನಡೆಸಿದರು.
ಕ್ಷೇತ್ರಗಳು ಅಭಿವೃದ್ಧಿಯಲ್ಲಿ ಸ್ವಲ್ಪಮಟ್ಟಿಗೆ ಹಿಂದುಳಿದಿದೆ,ಅದಕ್ಕಾಗಿ ಹೆಚ್ಚಿನ ಮಟ್ಟಿಗೆ ಅಭಿವೃದ್ಧಿ ಗೊಳಿಸಲು ಸರ್ಕಾರ ಮುಂದಾಗಲಿ ಆದರೆ ಅಭಿವೃದ್ಧಿಯ ಹೆಸರಲ್ಲಿ ಘನ ನೀಲಿ ಸಿದ್ದಪ್ಪಾಜಿಯವರ ನೀಲಗಾರರ ಪರಂಪರೆಯ ಆಚರಣೆಗಳಿಗೆ ಧಕ್ಕೆ ತರುವ ಕೆಲಸ ಮಾಡಬಾರದೆಂದು ವಿಷಾದ ವ್ಯಕ್ತಪಡಿಸಿದರು.
ಏಪ್ರಿಲ್ 24ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಮುಟ್ಟನಹಳ್ಳಿ ದೊಡ್ಡಮ್ಮತಾಯಿ ಕ್ಷೇತ್ರ, ಕಪ್ಪಡಿ ಕ್ಷೇತ್ರ, ಚಿಕ್ಕಲ್ಲೂರು ಕ್ಷೇತ್ರ, ಕುರುಬನ ಕಟ್ಟೆ ಕ್ಷೇತ್ರ, ಮತ್ತು ಮಳವಳ್ಳಿ ತಾಲೂಕಿನ ಹೊನ್ನಯಕನಹಳ್ಳಿ ಬಪ್ಪೇಗೌಡನಪುರ ಮಠಗಳನ್ನು ಒಳಗೊಂಡ ಪುಣ್ಯಕ್ಷೇತ್ರಗಳನ್ನು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗುವುದು ಎಂಬ ನಿರ್ಣಯವನ್ನು ಕೂಡಲೆ ಮಾನ್ಯ ಮುಖ್ಯ ಮಂತ್ರಿಗಳು ಕೈಬಿಡಬೇಕು ಎಂದು ಒತ್ತಾಯಿಸಿ ಘೋಷಣೆಯನ್ನು ಕೂಗಿದರು.
ಕೊಳ್ಳೇಗಾಲ ತಾಲೂಕು ಘನ ನೀಲಿ ಸಿದ್ದಪ್ಪಾಜಿಯವರ ಶ್ರೀ ಕ್ಷೇತ್ರ ಚಿಕ್ಕಲ್ಲೂರನ್ನು ಯಾವುದೇ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಬಾರದು ಮತ್ತು ಸಂಪ್ರದಾಯಕವಾಗಿ ಲಕ್ಷಾಂತರ ಸಿದ್ದಪ್ಪಾಜಿಯವರ ನೀಲಗಾರರು ಆಚರಿಸುವ ಪರಂಪರೆಯ ನಿತ್ಯ ದಾಸೋಹ ಪೂಜೆ ಪುರಸ್ಕಾರಗಳಿಗೆ ಧಕ್ಕೆ ತರಬಾರದು ಎಂದು ತಹಸೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆ ಶಾಂತಿ ಸಭೆಯಲ್ಲಿ ಬಂಡಳ್ಳಿ ಗ್ರಾಮದ ಯಜಮಾನರುಗಳು ಸೇರಿದಂತೆ ಸುತ್ತಳ್ಳಿಗಳ ನೀಲಗಾರರು, ಆಡಳಿತಾಧಿಕಾರಿ ಭರತ್ ರಾಜ್ ಅರಸು,ಚಂದ್ರಮಂಡಲ ಕಟ್ಟುವ ಶಾಗ್ಯ ಗ್ರಾಮದ ನೀಲಗಾರರು,ಸಿದ್ದಪ್ಪಾಜಿ ನೀಲಗಾರರ ಸಂಘದ ಯುವಕರು ಸೇರಿದಂತೆ ಗ್ರಾಮಸ್ಥರು ಇದ್ದರು.
ವರದಿ : ನಿಂಪು ರಾಜೇಶ್