
ಇಂದಿನ ಶಿಕ್ಷಣ ವ್ಯವಸ್ಥೆ
“ಗುರುರ್ ಬ್ರಹ್ಮ ಗುರುರ್ ವಿಷ್ಣು ಗುರುರ್ ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ “
ಇದರ ಅರ್ಥ
“ಗುರುವು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಾಕಾರವಾಗಿದ್ದು, ಸ್ವತಃ ಪರಬ್ರಹ್ಮನೇ ಆಗಿರುವ ಗುರು ಅಜ್ಞಾನವೆಂಬ ಕತ್ತಲಿನಿಂದ ಜ್ಞಾನವೆಂಬ ಬೆಳಕಿನೆಡೆಗೆ ಕೊಂಡೊಯುತ್ತಾನೆ” ಎಂಬುದಾಗಿದೆ.
ಶಿಕ್ಷಕ ಶಿಕ್ಷಣದ ಮುಖ್ಯಭಾಗ ಎಂಬುದನ್ನು ಮರೆಯುವಂತಿಲ್ಲ. ಅಲ್ಲವೇ?
ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲು ನಿಯೋಜನೆಗೊಂಡ ಎಲ್ಲರೂ ಔಪಚಾರಿಕವಾಗಿ ಶಿಕ್ಷಕರೆ. ಅದನ್ನು ಅವರು ಮಾಡಿಯೇ ಮಾಡುತ್ತಾರೆ. ಏಕೆಂದರೆ ಅಲ್ಲೊಂದು ಕಟ್ಟುಪಾಡು, ಬದ್ಧತೆ ಇರುತ್ತದೆ. ಆದರೆ ಗುರುವಾಗುವ ಹಂತ ಬೆಣ್ಣೆಯಿಂದ ತುಪ್ಪವಾದಂತೆ. ತುಪ್ಪದ ಶುದ್ಧತೆ, ಅದನ್ನು ಕೆಡಲು ಬಿಡುವುದಿಲ್ಲ.
ಸ್ವಸ್ಥ ಸಮಾಜದ ನಿರ್ಮಾಣ ಉತ್ತಮ ಶಿಕ್ಷಕರ ಸಮರ್ಪಣಾಭಾವದಿಂದ ಸಾಧ್ಯ ಎಂಬುದನ್ನು ಯಾವ ಶಿಕ್ಷಕರೂ ಮರೆಯದಿದ್ದರೆ ಒಳಿತು.
ಇಂದಿನ ಶಿಕ್ಷಣ ವ್ಯವಸ್ಥೆ ಹೇಗಿದೆ ಎಂದು ಕೇಳಿದರೆ, ಏನು ಹೇಳುವುದು. ಬೆಂಗಳೂರಿನಲ್ಲಿ ಒಂದು ಹೋಟೆಲ್ ನೋಡಿದೆ “ಹಳ್ಳಿ ಹಟ್ಟಿ”. ನಿಜವಾದ ಗಿಡ ಮರಗಳನ್ನು ಕಡಿದು ತೆಗೆದು, ಆ ಜಾಗದಲ್ಲಿ ಹೋಟೆಲ್ ನಿರ್ಮಿಸಿ, ನೈಸರ್ಗಿಕ ಹಳ್ಳಿ ಮನೆಯ ವಾತಾವರಣವನ್ನು ಸೃಷ್ಟಿಸಲು ರಾಶಿ ರಾಶಿ ಕೃತಕ (artificial) ಗಿಡಮರಗಳನ್ನು ಇಟ್ಟಿದ್ದರು. ಅವರ ಪ್ರಯತ್ನ ನನ್ನ ಮುಖದಲ್ಲಿ ವ್ಯಂಗ್ಯನಗುವನ್ನು ತರಿಸಿತು.
ಹಾಗೆಯೇ ಇಂದಿನ ಶಿಕ್ಷಣ ಕೃತಕವಾಗುತ್ತಿದೆಯೇ ಎನಿಸುತ್ತಿದೆ. ಹೇಳುವುದು, ಕಾರ್ಯಕ್ರಮಗಳನ್ನು ರೂಪಿಸುವುದು ಬೇರೆ. ಅದನ್ನು ಜಾರಿಗೆ ತರುವುದು ಪಾಲಿಸುವುದು, ಪಾಲಿಸುವುದಕ್ಕೆ ಸಹಕರಿಸುವುದು ಬೇರೆ.
2020ನೇ ಇಸವಿಯಲ್ಲಿ ಅಂದರೆ ಈಗ್ಗೆ 4 ವರ್ಷಗಳ ಹಿಂದೆ “ರಾಷ್ಟ್ರೀಯ ಶಿಕ್ಷಣ ನೀತಿ (NEP) ಯನ್ನು” ಜಾರಿಗೆ ತರಲಾಯಿತು. ಇದರಲ್ಲಿ ಶೈಕ್ಷಣಿಕ ವರ್ಷಗಳನ್ನು 5+3+3+4 ಎಂದು ವಿಂಗಡಿಸಲಾಯಿತು. ಈ 15 ವರ್ಷಗಳಲ್ಲಿ, 5 ವರ್ಷಗಳು ಮೂಲ(ಬೇಸಿಕ್ ಎಜುಕೇಶನ್) ಶಿಕ್ಷಣ. ಮೂರು ವರ್ಷಗಳು ಪೂರ್ವ-ಸಿದ್ಧತಾ ಶಿಕ್ಷಣ, ಮೂರು ವರ್ಷಗಳು ಮಾಧ್ಯಮಿಕ ಶಿಕ್ಷಣ ಮತ್ತು ನಾಲ್ಕು ವರ್ಷಗಳು ದ್ವಿತೀಯ ಹಂತಗಳ ಶಿಕ್ಷಣವೆಂದು ವಿಂಗಡಿಸಲಾಗಿದೆ. ಹಾಗೆ ನೋಡಿದರೆ ಅದು ಚೆನ್ನಾಗಿಯೇ ಇದೆ. ವಿದ್ಯಾರ್ಥಿಗಳು ಅವರಿಚ್ಚೆಯ ವಿಷಯವಸ್ತುಗಳನ್ನು ಆಯ್ಕೆ(ಎಲೆಕ್ಟಿವ್ ಪೇಪರ್) ಮಾಡಿಕೊಂಡು ಓದುವುದರಿಂದ ಇನ್ನೂ ಹೆಚ್ಚು ಆಸಕ್ತಿಯಿಂದ ಓದಿ ತಿಳಿದುಕೊಳ್ಳಬಹುದು. ಆದರೆ ಅದೂ ಸಹ ರಾಜಕೀಯ ರಂಗಗಳ ರಂಗಿನಾಟದಲ್ಲಿ ನಲುಗಿ ಹೋಗುತ್ತಿದೆ. ಕೇಂದ್ರಸರ್ಕಾರ ಬೇಕು ಎಂದು, ರಾಜ್ಯ ಸರ್ಕಾರ ಬೇಡ ಎಂದು ಹೀಗೆ ಏನೋ ಒಂದು ನಡೆಯುತ್ತಲೇ ಇರುತ್ತದೆ. ಪದವಿ ಮಟ್ಟದಲ್ಲಂತು ಅದ್ವಾನ ಒಂದು ವರ್ಷ ರಾಜ್ಯ ಶಿಕ್ಷಣ ನೀತಿ(SEP) ಮತ್ತೊಂದು ವರ್ಷ ರಾಷ್ಟ್ರೀಯ ಶಿಕ್ಷಣ ನೀತಿ (NEP) ಹೀಗೆ ಬದಲಾಯಿಸಲಾಗುತ್ತಿದೆ. ಮೈಸೂರು ದಸರಾ ನಾಡಿದ್ದು ಎನ್ನುವಾಗಲೂ ಇನ್ನೂ ಮೈಸೂರಿನ ಕೆಲವು ರಸ್ತೆಗಳಿಗೆ ಡಾಂಬರೀಕರಣ ನಡೆಯುತ್ತಿರುತ್ತದೆ. ಹಾಗೆ ಸರ್ಕಾರವೇ ಬಿಡುಗಡೆ ಮಾಡುವ ವೇಳಾಪಟ್ಟಿಯ ಪ್ರಕಾರವೇ ಕಾಲೇಜುಗಳು ಮೇ – ಜೂನ್ ನಲ್ಲಿ ಪ್ರಾರಂಭವಾದರೂ ಜೂಲೈ – ಆಗಸ್ಟ್ ವರೆಗೂ ಕೆಲವು ಪಠ್ಯಪುಸ್ತಕಗಳೇ ಬಂದಿರುವುದಿಲ್ಲ, ಆನ್ಲೈನಲ್ಲಿಯೂ ಸಿಗುವುದಿಲ್ಲ. ಹೀಗಾದರೆ ಉಪನ್ಯಾಸಕರು, ಪ್ರಾಧ್ಯಾಪಕರು ಹೇಗೆ ಪಾಠಮಾಡಲು ಸಾಧ್ಯ? ಶಾಲಾ -ಕಾಲೇಜುಗಳ ವೇಳಾಪಟ್ಟಿ ಬಿಡುಗಡೆ ಮಾಡುವ ಸರ್ಕಾರ ಅದಕ್ಕೆ ತಕ್ಕಂತೆ ಪೂರ್ವಭಾವಿಯಾಗಿ ಪಠ್ಯಪುಸ್ತಕ, ಶಿಕ್ಷಕರ ವರ್ಗಾವಣೆ ಮುಂತಾದ ವ್ಯವಸ್ಥೆಗಳನ್ನು ಮಾಡುವುದೊಳಿತು. ತನಗೆ ಹೆಸರು ಬರಬೇಕೆಂದೊ ಅಥವಾ ಕೆಲವು ಶೈಕ್ಷಣಿಕ ಯೋಜನೆಗಳಿಂದ ಹೆಚ್ಚು ಹಣ ಸಿಗುತ್ತದೆ ಎಂದೋ ಅಥವಾ ಇನ್ನೇನೋ ಕಾರಣಗಳಿಂದಲೋ ವಿದ್ಯಾರ್ಥಿಗಳ ಮೇಲೆ ಅಥವಾ ಶಿಕ್ಷಕರ ಮೇಲೆ ಅದರ ದುಷ್ಪರಿಣಾಮ ಆಗದಂತೆ ನೋಡಿಕೊಳ್ಳುವುದೊಳಿತಲ್ಲವೇ?
ರಾಸಾಯನಿಕಯುಕ್ತ ಆಹಾರದಿಂದ ಹಾರ್ಮೋನುಗಳ ವ್ಯತ್ಯಾಸ, ಸಾಮಾಜಿಕ ಜಾಲತಾಣಗಳ ಆಕರ್ಷಣೆ, ಸುಲಭವಾಗಿ ಕೈಗೆಟಕುತ್ತಿರುವ ಸಮಾಜಕಾರಕಗಳ ಹಾವಳಿ, ಪೋಷಕರು ತಮ್ಮ ಕೆಲಸಗಳಲ್ಲೇ ತಮ್ಮನ್ನು ತೊಡಗಿಸಿಕೊಂಡು ಅಲ್ಲಿಯೇ ಹೆಚ್ಚು ಮಗ್ನರಾಗಿರುವುದರಿಂದ ಮಕ್ಕಳ ಕಡೆ ಹೆಚ್ಚು ಗಮನ ಹರಿಸಲು ಸಾಧ್ಯವಾಗದೇ ಇರುವುದು, ಒಬ್ಬರಿಗೊಬ್ಬರು ಪೈಪೋಟಿಯಲ್ಲಿ ಐಷಾರಾಮಿ ಜೀವನದಲ್ಲಿ ತೊಡಗಿಕೊಂಡಿರುವುದು ಇವೇ ಮುಂತಾದ ಕಾರಣಗಳಿಂದಾಗಿ ವಿದ್ಯಾರ್ಥಿಗಳ ಏಕಾಗ್ರತೆ ಕಡಿಮೆಯಾಗಿ, ವಿದ್ಯಭ್ಯಾಸದ ಕಡೆ ಕೇಂದ್ರೀಕರಣ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳಿಂದ ಶಿಕ್ಷಕರಾಗಲಿ, ಪೋಷಕರಾಗಲಿ ಗೌರವವನ್ನು ನಿರೀಕ್ಷಿಸಲಾಗದ ಮಟ್ಟಿಗೆ ವಿದ್ಯಾರ್ಥಿವೃಂದ ಬೆಳೆದು ನಿಂತಿದೆ. ಕೆಟ್ಟ ಚೆಟಗಳ ಹಾವಳಿ ಮಿತಿಮೀರುತ್ತಿದೆ. ಸಾಮಾಜಿಕ ಜಾಲತಾಣವನ್ನೇ ಹಾಸುಹೊಕ್ಕು ಮಾಡಿಕೊಂಡು, ಮೋಜುಮಸ್ತಿಯೇ ಜೀವನವೆಂದುಕೊಂಡಿದ್ದಾರೆ.
ಇವುಗಳೆಲ್ಲವನ್ನು ಗಮನದಲ್ಲಿಟ್ಟುಕೊಂಡು, ಈಗಾಗಲೇ ಜಾರಿಯಲ್ಲಿರುವ ಹಲವಾರು ಉತ್ತಮ ಶಿಕ್ಷಣ ನೀತಿಗಳನ್ನು ಹಾಗೆಯೇ ಉಳಿಸಿಕೊಂಡು, ಅದರ ಜೊತೆಗೆ ಇನ್ನಷ್ಟು ರೂಪು ರೇಷೆಗಳನ್ನು ರೂಪಿಸಿ, ಜಾರಿಗೆ ತಂದು ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳಬೇಕಾಗಿದೆ.
✍🏻 ರಶ್ಮಿ ಕೆ. ವಿಶ್ವನಾಥ್
ಮೈಸೂರು