
ಗುರುವಾಗಿದ್ದ ಹಾಲಪ್ಪ ಸರ್
ಎಷ್ಟೋ ಮಹಾನ್ ವ್ಯಕ್ತಿಗಳ ಹುಟ್ಟಿದ ದಿನ – ಪುಣ್ಯ ತಿಥಿಗಳನ್ನು ಇಂದಿಗೂ ಆಚರಿಸುವ ಮೂಲಕ ಅವರನ್ನೂ, ಅವರ ಕೆಲಸಗಳನ್ನು ನೆನೆಯುವ ಸಂದರ್ಭದಲ್ಲಿ, ಚಿಕಾಗೋ ಸಮ್ಮೇಳನದ ಭಾಷಣದ ದಿನವನ್ನು (September 11, 1893) ಸಹ ಆಚರಿಸುತ್ತಾ ಬಂದಿರುವುದು ಜಗದ ಇತಿಹಾಸ. ಅದು ಸ್ವಾಮಿ ವಿವೇಕಾನಂದರ ಹೆಗ್ಗಳಿಕೆ. ಆ ಮೂಲಕವೇ ಅವರು ಶ್ರೇಷ್ಠ ಗುರುವಾಗಿ ನಿಲ್ಲುತ್ತಾರೆ. ಭಾರತದ ರಾಷ್ಟ್ರಪತಿಯಷ್ಟೇ ಆಗಿರದೆ ತಮ್ಮ ಜನ್ಮದಿನದಂದು ʼಶಿಕ್ಷಕರ ದಿನʼ ಆಚರಣೆ ಮಾಡುವಷ್ಟು ಪ್ರಭಾವ ಬೀರಿದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್, ವಿಜ್ಞಾನಿಯಾಗಿ, ಪ್ರೊಫೆಸರ್ ಆಗಿ, ದೇಶದ ರಾಷ್ಟ್ರಪತಿಯಾಗಿದ್ದ ಸರಳ ಜೀವಿ ಡಾ. ಅಬ್ದುಲ್ ಕಲಾಂ, ಅವರ ಮಾತುಗಳನ್ನು ಕೇಳಲು ತವಕಿಸುವಂತೆ ಮಾಡುವ ಡಾ. ಗುರುರಾಜ್ ಕರ್ಜಗಿ ಇವರುಗಳಂತಹ ಗುರುಗಳ ನಾಡಲ್ಲಿ ಜನಿಸಿದ ಪುಣ್ಯ ನಮ್ಮದು.
ಹಲವಾರು ಶಿಕ್ಷಕರು ಗುರುಗಳಾಗಿ ವಿದ್ಯಾರ್ಥಿಗಳನ್ನು ಜ್ಞಾನದೆಡೆಗೆ ಒಯ್ಯತ್ತಾರೆ, ಮತ್ತಷ್ಟು ಸಾಮಾನ್ಯ ಜನರೂ ಸಹ ಶಿಕ್ಷಕರಾಗಿ ಮಾರ್ಗದರ್ಶನ ನೀಡುತ್ತಾರೆ.
ಆದರೆ ದುರದೃಷ್ಟವಶಾತ್ ಕೆಲವು ಶಿಕ್ಷಕರ ಅನುಚಿತ ವರ್ತನೆ ಸಮಾಜದ ಏಳ್ಗೆಗೆ ಕಪ್ಪುಚುಕ್ಕಿಯಾಗಿಬಿಡುತ್ತದೆ. ಎಲ್ಲಾ ಹುದ್ದೆಯಲ್ಲಿರುವವರು ಮನುಷ್ಯರೇ ಆಗಿರುವುದರಿಂದ ಅವರ ವರ್ತನೆ ಅವರಿಗೆ. ಆದರೆ ‘ನೀನು ಶಿಕ್ಷಕ ವಿದ್ಯಾರ್ಥಿಗಳನ್ನು ತಿದ್ದಿ ಸರಿದಾರಿ ತೋರಲಿಕ್ಕಾಗಿಯೇ ಈ ವೃತ್ತಿಯಲ್ಲಿದ್ದೀಯೆ’ ಎನ್ನುವಂತಹ ಮಾತು ಅವರ ಜವಾಬ್ದಾರಿಯನ್ನು ತಿಳಿಸಿಕೊಟ್ಟರೆ ಒಳಿತು.
ನನ್ನದೊಂದು ಮಹದಾಸೆ ನನ್ನ ಎಲ್ಲಾ ನೆಚ್ಚಿನ ಗುರುಗಳನ್ನು ಮತ್ತೊಮ್ಮೆ ಸಂದಿಸಿ ಮಾತಾಡಿಸಿ ಅವರ ಆಶೀರ್ವಾದ ಪಡೆಯಬೇಕು ಎಂಬುದು.
ನಾವು ಓದುವ ಸಮಯದಲ್ಲಿ ನಮ್ಮ ಪೋಷಕರ ಹತ್ತಿರ ಕೂಡಾ ಫೋನ್ ಇಲ್ಲದಿದ್ದ ಕಾರಣ, ಈವಾಗ ಅವರ ಕಾಂಟ್ಯಾಕ್ಟ್ ಸಿಗುತ್ತಿಲ್ಲ. ನನ್ನ ನೆಚ್ಚಿನ ಗುರುಗಳಲ್ಲಿ ಒಬ್ಬರಾದ ಹಾಲಪ್ಪ ಸರ್ನನ್ನು ಮಾತಾಡಿಸಿ ಬರಬೇಕು ಎಂಬ ಹಂಬಲದಿಂದ ಅವರನ್ನು ಹುಡುಕಿ ಹೋದಾಗ, ಕುಮಾರ್ ಸರ್ ಸಿಕ್ಕಿದರು. ಕುಮಾರ್ ಸರ್, ಸಮಾಜ ಶಾಸ್ತ್ರದ ಮಾಸ್ತರು. ಮಮತಾಮಯಿ, ಅವರ ಆಸ್ತಿಯನ್ನು ಸ್ಕೂಲ್ ಹೆಸರಿಗೆ ಬರೆದುಕೊಟ್ಟ ದಾನಿ. ಒಂದು ದಿನ ಕ್ಲಾಸ್ ನಡೆಯುವಾಗ ನನ್ನನ್ನು ಎದ್ದು ನಿಲ್ಲಿಸಿ “ಈಕೆಯಂತೆ ನೀವು ಓದಬೇಕು” ಎಂದು ಇತರ ವಿದ್ಯಾರ್ಥಿಗಳಿಗೆ ನನ್ನನ್ನು ಮಾದರಿ ಮಾಡಿ ಹೊಗಳಿದವರು. ಅಂದು ನನಗೆ ಖುಷಿ – ನಾಚಿಕೆ ಎರಡೂ ಆಗಿದ್ದುಂಟು.
ಕುಮಾರ್ ಸರ್ ಹತ್ತಿರ, ಹಾಲಪ್ಪ ಸರ್ ಫೋನ್ ನಂಬರ್ ಕೇಳುವ ಪೀಠಿಕೆಯಾಗಿ, “ಹಾಲಪ್ಪ ಸರ್ ಎಲ್ಲಿದ್ದಾರೆ ಸರ್?” ಎಂದೆ. “ಇಲ್ಲಮ್ಮ ಅವರು ಹೋಗಿಬಿಟ್ರು” ಎಂದು ಹೇಳಿ ನಮ್ಮ ವಿಜ್ಞಾನ ಶಿಕ್ಷಕಿಯಾಗಿದ್ದ ಅವರ ಹೆಂಡತಿ ಉಮಾ ಮ್ಯಾಡಮ್ ಮತ್ತು ನಾವು ಓದುವಾಗ ಅದು 1ವರ್ಷದ ಪಾಪುವಾಗಿದ್ದ ಅವರ ಮಗಳ ವಿಷಯಗಳನ್ನು ಹೇಳಿದಾಗ, ʼಮತ್ತೆಂದೂ ಹಾಲಪ್ಪ ಸರ್ನನ್ನು ನೋಡಲಾಗುವುದಿಲ್ಲವಲ್ಲʼ ಎಂದು ಮನಸ್ಸಿನಲ್ಲೇ ನೊಂದುಕೊಂಡೆ.
Jss ಹೈಸ್ಕೂಲಿನ HM ಆಗಿದ್ದ ಹಾಲಪ್ಪ ಸರ್ ಗಣಿತ ಶಿಕ್ಷಕ. ಹಾಲಿನಷ್ಟೇ ಶುಭ್ರ ಮನಸುಳ್ಳವರು. ನಾನು ಮತ್ತು ನನ್ನ ಗೆಳತಿ ಒಂದು ದಿನ assemblyಗೆ ತಡವಾಗಿ ಹೋದ ಕಾರಣ ಶಾಲೆಯ ಸುತ್ತ ಮೂರು ಸುತ್ತು ಓಡಿಸಿದ್ದ ಶಿಸ್ತಿನ ಸಿಪಾಯಿ. 2ನೇ ಕಿರುಪರೀಕ್ಷೆಯಲ್ಲಿ ಎಲ್ಲರು ಗಣಿತದಲ್ಲಿ ಕಡಿಮೆ ಅಂಕ ತೆಗೆದುಕೊಂಡಾಗ, ಬಹಳವಾಗಿ ನೊಂದುಕೊಂಡು ಮಾತನಾಡಿದ್ದರು “ಯಾಕ್ರಿಲೆ ನನ್ನ subjectನಲ್ಲಿ ಹಿಂಗ್ ಮಾಡ್ತೀರಾ? ನಾನು ಪಾಠ ಮಾಡೋದು ನಿಮಗೆ ಅರ್ಥ ಅಗಂಗಿಲ್ಲೇನು?” ಎಂದು ಗದ್ಗದಿತರಾದ ಅವರ ಕಣ್ಣಲ್ಲಿ ಒಂದು ಹನಿ ಕಣ್ಣೀರು ಇಣಕಿದ್ದನ್ನು ನಾನು ಗಮನಿಸಿದ್ದೆ. ಕನ್ನಡ, ಹಿಂದಿ & ವಿಜ್ಞಾನ ಮೂರು ವಿಷಯದಲ್ಲೂ topper ಆಗಿದ್ದ ನನ್ನ ಕಡೆ ತಿರುಗಿ “ನಿಂಗು ಅರ್ಥ ಅಗಲ್ವೇನ್ಲೆ” ಎಂದು ಧಾರವಾಡದವರಾದ ಅವರು, ಅವರ ಧಾಟಿಯಲ್ಲೆ ಕೇಳಿದ್ದರು.
Mathsನಲ್ಲಿ ಯಾವಾಗ್ಲೂ ಹಿಂದಿರುತ್ತಿದ್ದ ನನಗೆ ಅವರ ಕಣ್ಣೀರನ್ನು ಸಹಿಸಲಾಗಲಿಲ್ಲ. ಅವರ ದುಃಖವನ್ನು ಹೋಗಲಾಡಿಸಬೇಕೆನಿಸಿತು. ಮನೆಗೆ ಬಂದವಳೇ ಬರೆದು ಬರೆದು ಚೆನ್ನಾಗಿ practice ಮಾಡಿದೆ. ಮೊದಲ ಬಾರಿಗೆ ಗಣಿತದಲ್ಲಿ 66 ಮಾರ್ಕ್ಸ್ ತೆಗೆದುಕೊಂಡೆ. ಸರ್ ಸಂತೋಷದಿಂದ ಬೀಗಿದ್ದನ್ನ ಗಮನಿಸಿದೆ. ಅವರಿಗೆ ತಾವು ಗೆದ್ದ ಭಾವವಿತ್ತು, ಅದಕ್ಕೆ ಕಾರಣ ನಾನು ಕೂಡಾ ಎಂಬ ಹೆಮ್ಮೆ ನನಗಿತ್ತು. ಸ್ಫೂರದ್ರೂಪಿ ಹಾಲ್ಲಪ್ಪ ಸರ್ಗೆ ತಮ್ಮ ಶಾಲೆಯ ಹಿತ, ವಿದ್ಯರ್ಥಿಗಳ ಏಳ್ಗೆ ಇವೆರಡಕ್ಕಿನ್ನ ಮಿಗಿಲು ಇನ್ನೊಂದಿರಲಿಲ್ಲ.
ವಿದ್ಯಾರ್ಥಿ ಜೀವನದ ಮಧುರವಾದ ನೆನಪುಗಳು ನಮ್ಮ ಕೊನೆಯ ಉಸಿರಿನವರೆಗೂ ನೆನಪಿನಲ್ಲುಳಿಯುವ ಆಸ್ತಿ.
- ರಶ್ಮಿ ಕೆ.ವಿಶ್ವನಾಥ್