
ಈ ಭೂಮಿ ನಮ್ಮದು…
ಈ ಭೂಮಿ ನಮ್ಮದು, ಆಕಾಶವು ಕೂಡ. ಭೂಮಿಯಲ್ಲಿ ಅಂತರ್ಜಲ ಉಳಿಸಿಕೊಳ್ಳಬೇಕು, ಆಕಾಶದಲ್ಲಿ ಓಜೋನ್ ಪದರ ಕಾಪಾಡಿಕೊಳ್ಳಬೇಕು.
ಮಗು ಚಿಕ್ಕದಿದ್ದಾಗ ಅಮ್ಮನನ್ನು ಒದೆಯುತ್ತೆ, ತುಳಿಯುತ್ತೆ, ಅಮ್ಮನ ಮೈಮೇಲೆ ಬಿದ್ದು ಹೊರಳಾಡುತ್ತೆ. ಆ ಅಮ್ಮನಿಗೆ ಎಲ್ಲವೂ ಚೆಂದ. ಎಲ್ಲಿಯವರೆಗೆ?! ಮಗು ದೊಡ್ಡವನಾಗುವವರೆಗೆ, ಅಮ್ಮ ತಾನು ಅನಾರೋಗ್ಯದಿಂದ ನರಳುವ ದಿನ ಬರುವವರೆಗೆ. ಅಮ್ಮನಿಂದಲೇ ಬೆಳೆದ ಮಗು, ತಾನು ಬೆಳೆದು ತನ್ನಿಂದಲೇ ಕಷ್ಟ ಪಡುತ್ತಿರುವ ಅಮ್ಮನನ್ನು ನೆಮ್ಮದಿಯಾಗಿ ಇರಲು ಬಿಟ್ಟು, ಅವಳ ಬಗ್ಗೆ ಕಾಳಜಿ ವಹಿಸದಿದ್ದರೆ ಹೇಗೆ?.
ಭೂಮಿಯನ್ನು ಉಳುಮೆ ಮಾಡಿ ಬಿತ್ತಿದರೆ ಭೂತಾಯಿ ಎಲ್ಲರ ಹೊಟ್ಟೆ ತುಂಬುವಷ್ಟು ಊಟ ಕೊಡುತ್ತಾಳೆ. ‘ಕೋಳಿ ಚಿನ್ನದ ಮೊಟ್ಟೆ ಇಡುತ್ತಿದೆ ಎಂದು ಎಲ್ಲಾ ಮೊಟ್ಟೆಗಳನ್ನು ಒಟ್ಟಿಗೆ ಪಡೆಯುವ ದುರಾಸೆಯಿಂದ ಕೋಳಿಯನ್ನೇ ಕೊಯ್ದುಬಿಟ್ಟರೆ’ ಏನು ಸಿಕ್ಕೀತು? ಮನುಷ್ಯನ ಪ್ರತಿಯೊಂದು ಚಟುವಟಿಕೆಗಳಿಗೂ ಭೂಮಿಯೇ ಆಧಾರ. ಅದನ್ನು ಮರೆತು ಭೂಮಿಯನ್ನೇ ಅಗೆಯುತ್ತಾ ಹೋಗುತ್ತಿದ್ದರೆ ಎಲ್ಲಿಯ ಉಳಿಗಾಲ?
ಕಬ್ಬಿಣ, ಚಿನ್ನದಂತಹ ಲೋಹಗಳನ್ನು ತೆಗೆಯಲು, ಅಂತರ್ಜಲಕ್ಕಾಗಿ, ದೊಡ್ಡ ದೊಡ್ಡ ಕಾರ್ಖಾನೆಗಳು, ಕಟ್ಟಡಗಳನ್ನು ಕಟ್ಟಲು, ಹೀಗೆ ತನ್ನೆಲ್ಲ ದುರಾಸೆಗಳಿಗೆ ಭೂಮಿಯನ್ನು ಅಗೆದು ಅಗೆದು ಹಿಂಸಿಸುತ್ತಿದ್ದಾನೆ. ತಾನಾಗೆ ಸೊಂಪಾಗಿ ಬೆಳೆದು ಮಳೆ ತರುತ್ತಿರುವ, ಪ್ರಾಣವಾಯು ಆಮ್ಲಜನಕ ನೀಡುತ್ತಿರುವ, ಹಣ್ಣು, ನೆರಳು ಎಲ್ಲವನ್ನು ಕೊಟ್ಟು ಸಲಹುತ್ತಿರುವ ಮರಗಳನ್ನೇ ಬುಡಸಮೇತ ಕಿತ್ತುಹಾಕಿ, ತನ್ನ ಸಾಮ್ರಾಜ್ಯ ಸ್ಥಾಪಿಸುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಮೆರೆಯುತ್ತಿದ್ದಾನೆ. ಕೈಗಾರೀಕರಣ, ಬಂಡವಾಳಶಾಹಿ ಎಂಬೆಲ್ಲ ಹೆಸರುಗಳಲ್ಲಿ ಭೂ ದರೋಡೆ ಮಾಡುತ್ತಿದ್ದಾನೆ. ಹೀಗೆಲ್ಲ ಮಾಡಿ ಭೂಮಿ ಸಡಿಲವಾದರೆ ಭೂ ಕುಸಿತ, ಭೂಕಂಪ ಆಗದೆ ಬೇರೇನಾದೀತು? ನಾವಿದ್ದೇವೆ, ಇರುತ್ತೇವೆ, ಹೋಗುತ್ತೇವೆ. ಮುಂದೆ ಬದುಕಬೇಕಾದದ್ದು ನಮ್ಮ ಮೊಕ್ಕಳು, ಮೊಮ್ಮಕ್ಕಳೆ ಅಲ್ಲವೇ? ನಮ್ಮ ಮುಂದಿನ ಪೀಳಿಗೆಗಾಗಿ ಕೋಟಿ ಕೋಟಿ ಅಸ್ತಿ ಮಾಡಿಡುವ ನಾವು, ಅತೀ ಮುಖ್ಯವಾಗಿ ಬೇಕಾಗಿರುವ ಪ್ರಕೃತಿ ಸಂಪತ್ತನ್ನು ಸಹ ಉಳಿಸಿ ಹೋಗಬೇಕು ಎಂಬ ಸ್ವಾರ್ಥ ಬೇಡವೆ? ಅದರ ಬಗ್ಗೆ ಯಾಕೆ ಯೋಚಿಸುತ್ತಿಲ್ಲ?
ಯೋಚಿಸಿ, ಉಳಿಸಿ, ಬೆಳೆಸಿ, ಸೊರಗಿಹೋಗುತ್ತಿರುವ ಭೂತಾಯಿಯ ಮೊಗದಲ್ಲು ತುಸು ನಗು ಅರಳಿಸಿ.
✍🏻 ರಶ್ಮಿ ಕೆ. ವಿಶ್ವನಾಥ್